ಅನ್ಯೋನ್ಯಾಶ್ರಯ ದೋಷ
ನಿಗಮನನ್ಯಾಯದ ದೋಷಗಳಲ್ಲಿ ಒಂದು. ಇದನ್ನು ಚಕ್ರಕದೋಷವೆಂದೂ ಕರೆಯುವುದುಂಟು. ಚಕ್ರಕದೋಷಕ್ಕೆ ಸಂವಾದಿಯಾಗಿ ಪಾಶ್ಚಾತ್ಯರಲ್ಲುಪಯೋಗಿಸುವ ಪದ ಸರ್‍ಕ್ಯೂಲರ್ ರೀಸನಿಂಗ್. ಈ ದೋಷವನ್ನು ಲಕ್ಷಣನಿರೂಪಣೆಯಲ್ಲೂ ಅನುಮಾನವಾಕ್ಯದಲ್ಲೂ (ಸಿಲೊಜಿ¸óÀಮ್) ಕಾಣಬಹುದು. ಒಂದು ಪದದ ಲಕ್ಷಣ ನಿರೂಪಣೆಯಲ್ಲಿ ಆ ಪದವನ್ನಾಗಲಿ, ಅದಕ್ಕೆ ಪರ್ಯಾಯವಾದ (ಸಿನೊನಿಮ್) ಪದವನ್ನಾಗಲಿ ಉಪಯೋಗಿಸಿದಾಗ ಅದನ್ನು ಪಾಶ್ಚಾತ್ಯ ತಾರ್ಕಿಕರು ಸರ್‍ಕ್ಯೂಲಸ್ ಡೆಫಿನಿಯನ್ಡೊ ಎಂದು ಕರೆಯುತ್ತಾರೆ. ನ್ಯಾಯ ಎಂದರೆ ನ್ಯಾಯವಾಗಿ ನಡೆದುಕೊಳ್ಳುವುದು; ಜೀರ್ಣಶಕ್ತಿ ಎಂದರೆ ಜೀರಕಶಕ್ತಿ; ಕುರುಡ ಎಂದರೆ ಅಂಧ-ಇವು ಲಕ್ಷಣನಿರೂಪಣೆಯ ಚಕ್ರಕದೋಷಕ್ಕೆ ಉದಾಹರಣೆಗಳು. ಇಲ್ಲಿ ಯಾವ ಶಬ್ದದ ಲಕ್ಷಣವನ್ನು ತಿಳಿಸಬೇಕೊ ಅದೇ ಶಬ್ದದ ಬೇರೆ ರೂಪವನ್ನು ಅಥವಾ ಪರ್ಯಾಯರೂಪವನ್ನು ಬಳಸಿದೆ. ವಾದದಲ್ಲಿ ಯಾವುದಾದರೂ ಒಂದು ಅನುಮಿತಿಗೆ ಕಾರಣ ಕೊಡಲು ಹೊರಟು ಕಾರಣ ಕೊಡದೆ ಅದೇ ಪ್ರತಿಜ್ಞೆಯನ್ನು ಅದೇ ಅರ್ಥವಿರುವ ಬೇರೆ ಮಾತಿನಲ್ಲಿ ತಿಳಿಸಿ ಆ ಪ್ರತಿಜ್ಞೆಯನ್ನು ಕಾರಣಬದ್ಧವಾಗಿ ಸಾಧಿಸಿದಂತಾಯಿತೆಂದು ಬಗೆಯುವುದು ಚಕ್ರಕದೋಷ. ಇದು ಕೆಟ್ಟ ನಡೆವಳಿಕೆ, ಏಕೆಂದರೆ ಇದು ಅಧರ್ಮ; ಭಿಕ್ಷೆ ಕೊಡಬೇಕು. ಏಕೆಂದರೆ ದಾನಮಾಡುವುದು ನಮ್ಮ ಕರ್ತವ್ಯ; ನಾನು ಈ ಕೆಲಸವನ್ನು ಮಾಡಕೂಡದು. ಏಕೆಂದರೆ ಅದು ತಪ್ಪು; ಅದು ತಪ್ಪು ಏಕೆಂದರೆ ಅದನ್ನು ಮಾಡಕೂಡದು ಎಂದು ನನಗೆ ಗೊತ್ತು; ಅವನು ಕಳ್ಳ ಏಕೆಂದರೆ ಕದ್ದದ್ದನ್ನು ಅವನು ಬಚ್ಚಿಟ್ಟಿದ್ದಾನೆ; ಕಳ್ಳನಲ್ಲದವನು ಬಚ್ಚಿಡುತ್ತಾನೆಯೇ? ಇದು ಸ್ಪಷ್ಟ-ಇವು ಚಕ್ರಕದೋಷಕ್ಕೆ ಉದಾಹರಣೆಗಳು. ಯಾವುದನ್ನು ಸ್ಥಾಪಿಸಬೇಕೊ ಅದನ್ನೇ ಬೇರೆ ಮಾತಿನಲ್ಲಿ ಹೇಳಿ ಅದನ್ನು ಸಾಧಿಸಿದಂತೆ ಇವುಗಳಲ್ಲಿ ಭಾವಿಸಲಾಗಿದೆ. ಇಂಥ ವಾದಗಳಲ್ಲಿ ದೋಷವನ್ನು ಮುಚ್ಚಿಡಲು ವಾದದ ಕೊನೆಯಲ್ಲಿ ಇದು ಸ್ಪಷ್ಟ, ಇದು ನಿರ್ವಿವಾದವಾದದ್ದು, ಇದನ್ನು ಪ್ರಾಜ್ಞರೆಲ್ಲ ಒಪ್ಪುತ್ತಾರೆ ಎಂಬ ಮಾತುಗಳನ್ನು ಸೇರಿಸುವುದುಂಟು.	
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ